ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಝೈದ್ ಬಿನ್ ಖಾಲಿದ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ನಮ್ಮೊಡನೆ ಫಜ್ರ್ ನಮಾಝ್ ನಿರ್ವಹಿಸಿದರು. ಅದರ ಹಿಂದಿನ ರಾತ್ರಿ ಮಳೆ ಸುರಿದಿತ್ತು. ನಮಾಝ್ ನಿರ್ವಹಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶಿಸಿದ್ದಾರೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನಲ್ಲಿ ವಿಶ್ವಾಸವಿಟ್ಟನು ಮತ್ತು ನಕ್ಷತ್ರಗಳನ್ನು ನಿಷೇಧಿಸಿದನು. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನನ್ನು ನಿಷೇಧಿಸಿದನು ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟನು."
Sahih/Authentic. - Al-Bukhari and Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ಫಜ್ರ್ ನಮಾಝ್ ನಿರ್ವಹಿಸಿದರು. ಹುದೈಬಿಯಾ ಮಕ್ಕಾದ ಬಳಿಯಿರುವ ಒಂದು ಹಳ್ಳಿ. ಅದರ ಹಿಂದಿನ ರಾತ್ರಿ ಅಲ್ಲಿ ಮಳೆ ಸುರಿದಿತ್ತು. ಸಲಾಂ ಹೇಳಿ ನಮಾಝ್ ಮುಗಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ಸರ್ವಶಕ್ತನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಉತ್ತರಿಸಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಮಳೆಯ ವಿಷಯದಲ್ಲಿ ಜನರಲ್ಲಿ ಎರಡು ವಿಭಾಗಗಳಿದ್ದು, ಒಂದು ವಿಭಾಗವು ಸರ್ವಶಕ್ತನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತದೆ ಮತ್ತು ಇನ್ನೊಂದು ವಿಭಾಗವು ಸರ್ವಶಕ್ತನಾದ ಅಲ್ಲಾಹನನ್ನು ನಿಷೇಧಿಸುತ್ತದೆ ಎಂದು ಸರ್ವಶಕ್ತನಾದ ಅಲ್ಲಾಹು ವಿವರಿಸಿದ್ದಾನೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ಮಳೆ ಸುರಿಯುವುದನ್ನು ಅಲ್ಲಾಹನಿಗೆ ಸೇರಿಸಿದ್ದಾನೆ. ಅವನು ಸೃಷ್ಟಿಕರ್ತ ಮತ್ತು ಪ್ರಪಂಚ ನಿಯಂತ್ರಕನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದಾನೆ ಮತ್ತು ನಕ್ಷತ್ರಗಳನ್ನು ನಿಷೇಧಿಸಿದ್ದಾನೆ. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ಅಲ್ಲಾಹನನ್ನು ನಿಷೇಧಿಸಿದ್ದಾನೆ ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟಿದ್ದಾನೆ. ಇದು ಚಿಕ್ಕ ಸತ್ಯನಿಷೇಧ (ಕುಫ್ರ್ ಅಸ್ಗರ್) ಆಗಿದೆ. ಏಕೆಂದರೆ ಇಲ್ಲಿ ಮಳೆ ಸುರಿಯುವುದನ್ನು ನಕ್ಷತ್ರಗಳಿಗೆ ಸೇರಿಸಿ ಹೇಳಲಾಗಿದೆ. ಮಳೆ ಸುರಿಯಲು ಅಲ್ಲಾಹು ನಕ್ಷತ್ರಗಳನ್ನು ಧಾರ್ಮಿಕವಾಗಿ ಅಥವಾ ದೈವಿಕ ವಿಧಿಗೆ ಸಂಬಂಧಿಸಿ ಕಾರಣವನ್ನಾಗಿ ಮಾಡಿಲ್ಲ. ಆದರೆ ಯಾರು ಮಳೆ ಸುರಿಯುವುದನ್ನು ಅಥವಾ ಭೂಮಿಯಲ್ಲಿ ನಡೆಯುವ ಇತರ ವಿದ್ಯಮಾನಗಳನ್ನು ನಕ್ಷತ್ರಗಳ ಉದಯ ಮತ್ತು ಅಸ್ತಮಕ್ಕೆ ಸೇರಿಸಿ, ಇವೆಲ್ಲವೂ ನಕ್ಷತ್ರಗಳ ಚಲನೆಯಿಂದ ಸಂಭವಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದರೆ ಅವನು ದೊಡ್ಡ ಸತ್ಯನಿಷೇಧವನ್ನು (ಕುಫ್ರ್ ಅಕ್ಬರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ.

ಹದೀಸಿನ ಪ್ರಯೋಜನಗಳು

  1. ಮಳೆ ಸುರಿದ ನಂತರ, "ಮುತಿರ್‌ನಾ ಬಿಫದ್ಲಿಲ್ಲಾಹಿ ವರಹ್ಮತಿಹೀ" (ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿಯಿತು) ಎಂದು ಹೇಳುವುದು ಅಪೇಕ್ಷಣೀಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಮಳೆ ಸುರಿಯುವುದು ಮುಂತಾದ (ಅಲ್ಲಾಹನ) ಅನುಗ್ರಹಗಳನ್ನು ನಕ್ಷತ್ರಗಳ ಸೃಷ್ಟಿ ಮತ್ತು ಪ್ರವೃತ್ತಿ ಎಂದು ನಂಬುವವನು ದೊಡ್ಡ ಸತ್ಯನಿಷೇಧ (ಕುಫ್ರ್ ಅಕ್ಬರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ. ಆದರೆ ಅದು ಮಳೆ ಸುರಿಯಲು ಕಾರಣವಾಗಿದೆ ಎಂದು ಹೇಳುವವನು ಚಿಕ್ಕ ಸತ್ಯನಿಷೇಧ (ಕುಫ್ರ್ ಅಸ್ಗರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ. ಏಕೆಂದರೆ ಅದು ಮಳೆ ಸುರಿಯಲು ಧಾರ್ಮಿಕ ಅಥವಾ ಭೌತಿಕ ಕಾರಣವಲ್ಲ.
  3. ಅನುಗ್ರಹವನ್ನು ನಿಷೇಧಿಸಿದರೆ ಅದು ಸತ್ಯನಿಷೇಧಕ್ಕೆ ಕಾರಣವಾಗುತ್ತದೆ ಮತ್ತು ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿದರೆ ಅದು ಸತ್ಯವಿಶ್ವಾಸಕ್ಕೆ ಕಾರಣವಾಗುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
  4. ಇಂತಿಂತಹ ನಕ್ಷತ್ರದ ಕಾರಣದಿಂದ ಮಳೆ ಸುರಿಯಿತು ಎಂದು ಹೇಳುವುದನ್ನು ಈ ಹದೀಸ್ ವಿರೋಧಿಸುತ್ತದೆ. ಅದರ ಮೂಲಕ ಉದ್ದೇಶಿಸುವುದು ಮಳೆ ಸುರಿಯುವ ಸಮಯವಾಗಿದ್ದರೂ ಸರಿ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆ ಇದೆ.
  5. ಒಳಿತನ್ನು ಪಡೆಯುವುದು ಮತ್ತು ಕೆಡುಕನ್ನು ದೂರೀಕರಿಸುವ ವಿಷಯದಲ್ಲಿ ನಮ್ಮ ಹೃದಯವು ಅಲ್ಲಾಹನನ್ನು ಅವಲಂಬಿಸಿಕೊಂಡಿರಬೇಕಾದುದು ಕಡ್ಡಾಯವೆಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!