ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."
Sahih/Authentic. - Al-Bukhari

ವಿವರಣೆ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ: ಸಹಾಬಿಗಳು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಂಟೆಯಲ್ಲಿ ಸವಾರಿ ಮಾಡುತ್ತಾ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ನಂತರ ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿ ಹಾಕಿದರು. ನಂತರ ಅವರೊಡನೆ, "ನಿಮ್ಮಲ್ಲಿ ಮುಹಮ್ಮದ್ ಯಾರು?" ಎಂದು ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರ ನಡುವೆ ಒರಗಿ ಕುಳಿತಿದ್ದರು. ಸಹಾಬಿಗಳು ಉತ್ತರಿಸಿದರು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಆಗ ಪ್ರವಾದಿಯವರು, "ನನಗೆ ನಿನ್ನ ಮಾತು ಕೇಳುತ್ತಿದೆ. ನಿನಗೇನು ಬೇಕು ಕೇಳು ಉತ್ತರಿಸುತ್ತೇನೆ" ಎಂದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಅಂದರೆ, ನನ್ನ ಮೇಲೆ ಸಿಟ್ಟು ಮಾಡಿಕೊಳ್ಳಬಾರದು. ನನ್ನ ಪ್ರಶ್ನೆ ಕೇಳಿ ಕಸಿವಿಸಿಯಾಗಬಾರದು. ಅವರು ಹೇಳಿದರು: "ನೀನು ಕೇಳಲು ಬಯಸುವುದನ್ನು ಕೇಳು." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಜನರ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಆಗ ಪ್ರವಾದಿಯವರು ತಾನು ಹೇಳುತ್ತಿರುವುದು ಸತ್ಯವೆಂದು ಒತ್ತುಕೊಡಲು ಆಣೆ ಹಾಕುತ್ತಾ ಹೇಳಿದರು: "ಅಲ್ಲಾಹನಾಣೆ! ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್‌ಗಳನ್ನು, ಅಂದರೆ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು, ಅಂದರೆ ರಮದಾನ್ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು, ಅಂದರೆ ಝಕಾತನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಅವರು ಇಸ್ಲಾಂ ಸ್ವೀಕರಿಸಿದರು ಮತ್ತು ತನ್ನ ಗೋತ್ರವನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುತ್ತೇನೆಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ನಂತರ ತನ್ನನ್ನು ಪರಿಚಯಿಸುತ್ತಾ ತಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ ಎಂದು ಹೇಳಿದರು.

ಹದೀಸಿನ ಪ್ರಯೋಜನಗಳು

  1. ಈ ಹದೀಸ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಯವನ್ನು ತಿಳಿಸುತ್ತದೆ. ಏಕೆಂದರೆ ಅವರ ಸಂಗಡಿಗರ ನಡುವೆ ಅವರನ್ನು ಗುರುತಿಸಲು ಆ ವ್ಯಕ್ತಿಗೆ ಸಾಧ್ಯವಾಗಲಿಲ್ಲ. (ಏಕೆಂದರೆ ಎಲ್ಲರೂ ಒಂದೇ ಪೋಷಾಕಿನಲ್ಲಿದ್ದರು).
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ನಡವಳಿಕೆಯನ್ನು ಮತ್ತು ಪ್ರಶ್ನೆಗೆ ಉತ್ತರಿಸುವಾಗ ಅವರು ತೋರಿದ ಸೌಮ್ಯತೆಯನ್ನು ಈ ಹದೀಸ್ ವಿವರಿಸುತ್ತದೆ. ಸೌಮ್ಯವಾಗಿ ಉತ್ತರ ನೀಡುವುದು ಧರ್ಮ ಪ್ರಚಾರದ ಯಶಸ್ವಿಗೆ ಕಾರಣವಾಗುತ್ತದೆ.
  3. ಒಬ್ಬ ವ್ಯಕ್ತಿಯ ಗುರುತು ಹೇಳಲು ಬಿಳಿ, ಕಪ್ಪು, ಉದ್ದ, ಗಿಡ್ಡ ಎಂಬಿತ್ಯಾದಿ ಪದಗಳನ್ನು ಬಳಸಬಹುದೆಂದು ಈ ಹದೀಸ್ ತಿಳಿಸುತ್ತದೆ. ಆದರೆ ಅದು ಅವನ ನ್ಯೂನತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದಾಗಿರಬಾರದು. ಹಾಗೆಯೇ, ಅವನಿಗೆ ಅದು ಇಷ್ಟವಿಲ್ಲದಿದ್ದರೆ ಹಾಗೆ ಹೇಳಬಾರದು.
  4. ಅಗತ್ಯವಿದ್ದರೆ ಸತ್ಯನಿಷೇಧಿ ಮಸೀದಿಯನ್ನು ಪ್ರವೇಶಿಸಬಹುದು ಎಂದು ಈ ಹದೀಸ್ ತಿಳಿಸುತ್ತದೆ.
  5. ಈ ಹದೀಸಿನಲ್ಲಿ ಹಜ್ಜ್ ಕರ್ಮದ ಬಗ್ಗೆ ಉಲ್ಲೇಖವಿಲ್ಲ. ಬಹುಶಃ ಆ ಸಮಯದಲ್ಲಿ ಅದು ಕಡ್ಡಾಯವಾಗಿಲ್ಲದಿರಬಹುದು.
  6. ಜನರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುವ ವಿಷಯದಲ್ಲಿ ಸಹಾಬಿಗಳಿಗಿದ್ದ ಉತ್ಸಾಹವನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅವರು ಇಸ್ಲಾಂ ಸ್ವೀಕರಿಸಿದ ತಕ್ಷಣ ತಮ್ಮ ಜನರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದರು.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!