ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನವನ್ನು (ಖುತ್ಬತುಲ್ ಹಾಜ) ಕಲಿಸಿಕೊಟ್ಟರು: "ನಿಶ್ಚಯವಾಗಿಯೂ ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ನಾವು ಅವನಲ್ಲಿ ಸಹಾಯ ಬೇಡುತ್ತೇವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. "ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು. ಅವರಿಬ್ಬರಿಂದ ಅನೇಕ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಬಗ್ಗೆ ನೀವು ಪರಸ್ಪರ ಕೇಳುತ್ತಿರುವಿರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧಗಳನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಲೇ ಇದ್ದಾನೆ." [ನಿಸಾಅ್‌ 1]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಮರಣಹೊಂದುವಂತಾಗದಿರಲಿ." [ಆಲು ಇಮ್ರಾನ್:102]. "ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ. ಅವನು ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಮಹಾ ವಿಜಯವನ್ನು ಪಡೆದನು." [ಅಹ್‌ಝಾಬ್:70-71].
Sahih/Authentic. - Ibn Maajah

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನ (ಖುತ್ಬತುಲ್ ಹಾಜ) ಕಲಿಸಿಕೊಟ್ಟರೆಂದು ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುತ್ತಿದ್ದಾರೆ. ಇದು ಪ್ರವಚನಗಳ ಆರಂಭದಲ್ಲಿ ಮತ್ತು ವಿವಾಹದ ಪ್ರವಚನ, ಶುಕ್ರವಾರದ ಪ್ರವಚನ ಮುಂತಾದ ಅಗತ್ಯದ ಪ್ರವಚನಗಳಿಗೆ ಮುಂಚೆ ಪಠಿಸಲಾಗುವ ವಾಕ್ಯಗಳಾಗಿವೆ. ಎಲ್ಲಾ ರೀತಿಯ ಸ್ತುತಿ-ಪ್ರಶಂಸೆಗಳಿಗೆ ಅಲ್ಲಾಹು ಮಾತ್ರ ಅರ್ಹನು, ಅವನಿಂದ ಮಾತ್ರ ಸಹಾಯ ಯಾಚಿಸುವುದು, ಪಾಪಗಳನ್ನು ಕ್ಷಮಿಸಲು ಮತ್ತು ನಿರ್ಲಕ್ಷಿಸಲು ಬೇಡುವುದು, ದೇಹದ ಕೆಡುಕುಗಳು ಮುಂತಾದ ಎಲ್ಲಾ ರೀತಿಯ ಕೆಡುಕುಗಳಿಂದ ಅವನಲ್ಲಿ ರಕ್ಷಣೆ ಬೇಡುವುದು ಮುಂತಾದ ಮಹಾನ್ ಅರ್ಥಗಳನ್ನು ಈ ಪ್ರವಚನವು ಒಳಗೊಂಡಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಸನ್ಮಾರ್ಗವು ಅಲ್ಲಾಹನ ಕೈಯಲ್ಲಿದೆ, ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ನಂತರ ಅವರು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂಬ ಏಕದೇವತ್ವದ ಸಾಕ್ಷ್ಯ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂಬ ಪ್ರವಾದಿತ್ವದ ಸಾಕ್ಷ್ಯವನ್ನು ಪಠಿಸಿದರು. ನಂತರ ಮೂರು ಶ್ಲೋಕಗಳನ್ನು ಪಠಿಸಿ ಪ್ರವಚನವನ್ನು ಮುಗಿಸಿದರು. ಈ ಮೂರು ಶ್ಲೋಕಗಳು ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ, ಅವನ ಆಜ್ಞೆಗಳನ್ನು ಪಾಲಿಸುವ ಮೂಲಕ ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನನ್ನು ಭಯಪಡಬೇಕೆಂಬ ಆಜ್ಞೆಯನ್ನು ಒಳಗೊಂಡಿವೆ. ಅದೇ ರೀತಿ ಹೀಗೆ ಅಲ್ಲಾಹನನ್ನು ಭಯಪಟ್ಟು ಜೀವಿಸುವವರಿಗೆ ಸಿಗುವ ಪ್ರತಿಫಲವೇನೆಂದರೆ, ಅವರ ಕರ್ಮಗಳು ಮತ್ತು ಮಾತುಗಳು ಸರಿಯಾಗುತ್ತವೆ, ಅವರ ಪಾಪಗಳನ್ನು ಕ್ಷಮಿಸಲಾಗುತ್ತದೆ ಮತ್ತು ಇಹಲೋಕದಲ್ಲಿ ಅವರಿಗೆ ಶುದ್ಧವಾದ ಜೀವನ ಮತ್ತು ಪರಲೋಕದಲ್ಲಿ ಸ್ವರ್ಗವು ಸಿಗುತ್ತದೆ.

ಹದೀಸಿನ ಪ್ರಯೋಜನಗಳು

  1. ವಿವಾಹದ ಪ್ರವಚನ, ಶುಕ್ರವಾರದ ಪ್ರವಚನ ಮುಂತಾದವುಗಳನ್ನು ಈ ಪ್ರವಚನದ ಮೂಲಕ ಪ್ರಾರಂಭಿಸುವುದು ಅಪೇಕ್ಷಣೀಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಪ್ರವಚನವು ಅಲ್ಲಾಹನ ಸ್ತುತಿ, ಎರಡು ಸಾಕ್ಷ್ಯವಚನಗಳ ಉಚ್ಛಾರ ಮತ್ತು ಕೆಲವು ಕುರ್‌ಆನ್ ಶ್ಲೋಕಗಳನ್ನು ಒಳಗೊಂಡಿರಬೇಕೆಂದು ಈ ಹದೀಸ್ ತಿಳಿಸುತ್ತದೆ.
  3. ಧಾರ್ಮಿಕವಾಗಿ ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಿಗೆ ಕಲಿಸಿಕೊಟ್ಟಿದ್ದಾರೆಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!