ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ. ಆದ್ದರಿಂದ ನೀವು ಅವರ ಬಳಿಗೆ ಹೋದರೆ, ಅವರನ್ನು “ಅಲ್ಲಾಹನ ಹೊರತು ಆರಾಧನೆಗೆ ಯಾರೂ ಅರ್ಹರಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆಂದು” ಸಾಕ್ಷಿ ವಹಿಸಲು ಆಹ್ವಾನಿಸಿರಿ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಮುಆದ್ ಬಿನ್ ಜಬಲ್‌ರನ್ನು ಯಮನ್‌ಗೆ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ. ಆದ್ದರಿಂದ ನೀವು ಅವರ ಬಳಿಗೆ ಹೋದರೆ, ಅವರನ್ನು “ಅಲ್ಲಾಹನ ಹೊರತು ಆರಾಧನೆಗೆ ಯಾರೂ ಅರ್ಹರಲ್ಲ ಮತ್ತು ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆಂದು” ಸಾಕ್ಷಿ ವಹಿಸಲು ಆಹ್ವಾನಿಸಿರಿ. ಅವರು ನಿಮ್ಮ ಮಾತನ್ನು ಅನುಸರಿಸಿದರೆ, ಅಲ್ಲಾಹು ಅವರ ಮೇಲೆ ಹಗಲು ರಾತ್ರಿಯಲ್ಲಿ ಐದು ನಮಾಝ್‌ಗಳನ್ನು ಕಡ್ಡಾಯಗೊಳಿಸಿದ್ದಾನೆಂದು ತಿಳಿಸಿರಿ. ಅವರು ಅದನ್ನೂ ಅನುಸರಿಸಿದರೆ, ಅಲ್ಲಾಹನು ಅವರ ಮೇಲೆ ಝಕಾತನ್ನು ಕಡ್ಡಾಯಗೊಳಿಸಿದ್ದಾನೆಂದು ಹೇಳಿರಿ. ಅದು ಅವರಲ್ಲಿರುವ ಶ್ರೀಮಂತರಿಂದ ತೆಗೆದು ಅವರಲ್ಲಿರುವ ಬಡವರಿಗೆ ನೀಡಲಾಗುತ್ತದೆ. ಅವರು ಅದನ್ನೂ ಅನುಸರಿಸಿದರೆ, ಅವರ ಅತ್ಯುತ್ತಮ ಸಂಪತ್ತಿನ ಬಗ್ಗೆ ಎಚ್ಚರ ವಹಿಸಿರಿ. (ಅದನ್ನು ವಶಪಡಿಸಬೇಡಿ). ಅನ್ಯಾಯಕ್ಕೊಳಗಾದವನ ಪ್ರಾರ್ಥನೆಯನ್ನು ಭಯಪಡಿರಿ. ಏಕೆಂದರೆ ಅದರ ಮತ್ತು ಅಲ್ಲಾಹನ ನಡುವೆ ಯಾವುದೇ ಪರದೆ ಇರುವುದಿಲ್ಲ.”
Sahih/Authentic. - Al-Bukhari and Muslim

ವಿವರಣೆ

ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಯಮನ್‌ಗೆ ಧರ್ಮಪ್ರಚಾರಕರಾಗಿ ಮತ್ತು ಬೋಧಕರಾಗಿ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ, ಅಲ್ಲಿನ ಜನತೆ ಕ್ರಿಶ್ಚಿಯನ್ನರಾಗಿರುವುದರಿಂದ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ನಂತರ ಅತ್ಯಂತ ಪ್ರಾಮುಖ್ಯವಾದ ವಿಷಯಗಳನ್ನು ಮೊದಲು ಬೋಧಿಸಬೇಕು ಎಂದು ವಿವರಿಸಿಕೊಟ್ಟರು. ಮೊದಲು ಅವರ ವಿಶ್ವಾಸವನ್ನು ಸರಿಪಡಿಸಲು, ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಮತ್ತು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷಿ ವಹಿಸಲು ಅವರನ್ನು ಆಹ್ವಾನಿಸಬೇಕು. ಇದರ ಮೂಲಕ ಅವರು ಇಸ್ಲಾಂ ಧರ್ಮವನ್ನು ಪ್ರವೇಶಿಸುತ್ತಾರೆ. ಅವರು ಅದನ್ನು ಅನುಸರಿಸಿದರೆ ನಮಾಝ್ ಸಂಸ್ಥಾಪಿಸಲು ಅವರಿಗೆ ಆದೇಶ ನೀಡಬೇಕು. ಏಕೆಂದರೆ, ನಮಾಝ್ ಏಕದೇವವಿಶ್ವಾಸದ ನಂತರದ ಸ್ಥಾನದಲ್ಲಿರುವ ಅತಿದೊಡ್ಡ ಕಡ್ಡಾಯ ಕಾರ್ಯವಾಗಿದೆ. ಅವರು ನಮಾಝ್ ಸಂಸ್ಥಾಪಿಸಿದರೆ, ಅವರಲ್ಲಿರುವ ಶ್ರೀಮಂತರೊಡನೆ ಅವರ ಆಸ್ತಿಯ ಒಂದು ಭಾಗವನ್ನು ಝಕಾತ್ (ಕಡ್ಡಾಯ ದಾನ) ಆಗಿ ಬಡವರಿಗೆ ನೀಡಲು ಆದೇಶಿಸಬೇಕು. ಅವರ ಅತ್ಯುತ್ತಮ ಸಂಪತ್ತನ್ನು ತೆಗೆದುಕೊಳ್ಳಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದರು. ಏಕೆಂದರೆ, ಈ ವಿಷಯದಲ್ಲಿ ಮಧ್ಯಮ ನಿಲುವನ್ನು ಪಾಲಿಸಬೇಕಾಗಿದೆ. ನಂತರ ಅನ್ಯಾಯದಿಂದ ದೂರವಿರಲು ಉಪದೇಶಿಸಿದರು. ಅನ್ಯಾಯಕ್ಕೊಳಗಾದವನು ಅವರ ವಿರುದ್ಧ ಪ್ರಾರ್ಥಿಸದಿರುವುದಕ್ಕಾಗಿ. ಏಕೆಂದರೆ, ಅನ್ಯಾಯಕ್ಕೊಳಗಾದವನ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡುತ್ತಾನೆ.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ಸಾಕ್ಷಿ ವಹಿಸಬೇಕು ಎಂದರೆ ಆರಾಧನೆಗಳನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು ಮತ್ತು ಅಲ್ಲಾಹು ಅಲ್ಲದವರನ್ನು ಆರಾಧಿಸಬಾರದು ಎಂದರ್ಥ.
  2. ಮುಹಮ್ಮದ್ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸಬೇಕು ಎಂದರೆ ಅವರಲ್ಲಿ ಮತ್ತು ಅವರು ತಂದ ಸಂದೇಶದಲ್ಲಿ ವಿಶ್ವಾಸವಿಡಬೇಕು, ಅವರ ಮಾತುಗಳನ್ನು ಸತ್ಯವೆಂದು ನಂಬಬೇಕು ಮತ್ತು ಅವರು ಮನುಕುಲಕ್ಕೆ ಕಳುಹಿಸಲಾದ ಅಂತಿಮ ಪ್ರವಾದಿಯೆಂದು ವಿಶ್ವಾಸವಿಡಬೇಕು ಎಂದರ್ಥ.
  3. ಜ್ಞಾನವಿರುವವರೊಡನೆ ಮತ್ತು ಸಂಶಯವಿರುವವರೊಡನೆ ಮಾತನಾಡುವುದು ಅವಿವೇಕಿಗಳೊಡನೆ ಮಾತನಾಡಿದಂತಲ್ಲ ಎಂದು ಈ ಹದೀಸ್ ತಿಳಿಸುತ್ತದೆ. ಆದ್ದರಿಂದಲೇ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಆದ್‌ರನ್ನು ಎಚ್ಚರಿಸುತ್ತಾ ಹೇಳಿದರು: “ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ.”
  4. ಸಂಶಯ ಮೂಡಿಸುವವರ ಸಂಶಯಗಳಿಂದ ಪಾರಾಗಲು ಮುಸಲ್ಮಾನನು ಯಾವಾಗಲೂ ತನ್ನ ಧರ್ಮದ ಬಗ್ಗೆ ಒಳನೋಟವನ್ನು ಹೊಂದಿರಬೇಕಾದ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಇದು ಧರ್ಮದ ಬಗ್ಗೆ ಕಲಿಯುವುದರಿಂದ ಸಾಧಿಸಬಹುದು.
  5. ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿಯಾಗಿ ಕಳುಹಿಸಿದ ನಂತರ ಯಹೂದಿಗಳ ಮತ್ತು ಕ್ರಿಶ್ಚಿಯನ್ನರ ಧರ್ಮಗಳು ಅಸಿಂಧುವಾಗಿವೆ; ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದಿದ್ದರೆ, ಅವರಿಗೆ ಪುನರುತ್ಥಾನ ದಿನ ಮೋಕ್ಷ ಸಿಗುವುದಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!